ಸಾವು ಸುತ್ತ ನೋವು
*ಸಾವು ಎಷ್ಟು ದೂರವೋ ಅಷ್ಟೇ ಸಮೀಪ!*
ರಾತ್ರಿ ಕಳೆದು ಬೆಳಕು ಹರಿಯುವುದರೊಳಗೆ ಈ ಜಗತ್ತಿನಲ್ಲಿ ಅದೆಷ್ಟೋ ಬದಲಾವಣೆಗಳು ವಿಂಚಂತೆ ನಡೆದು ಹೋಗುತ್ತವೆ. ಸಮಯ ಕಳೆಯುವುದರೊಳಗೆ ಎಲ್ಲವೂ ಮುಗಿದು ಜೊತೆಗಿದ್ದವರು ಕೇವಲ ನೆನಪಾಗಿ ಉಳಿದುಬಿಡುತ್ತಾರೆ. ನಮ್ಮನ್ನು ಬಿಟ್ಟೂ ಬಿಡದೆ ಕಾಡುವ ಪ್ರಶ್ನೆಯೇ ಈ ಸಾವು. ನಾನು ಇದ್ದಾಗ ಸಾವು ಬರಲ್ಲ, ಸಾವು ಬಂದಾಗ ನಾನು ಇರಲ್ಲ ಎನ್ನುವ ಕವಿವಾಣಿ ನೆನಪಾಗುತ್ತದೆ.
ಕಳೆವ ಪ್ರತಿಯೊಂದು ಗಳಿಗೆಯನ್ನೂ ಸಂತಸದಿಂದ ಕಳೆಯಬೇಕು. ಏಕೆಂದರೆ ಸಾವು ನಾಳೆಯೇ ಬರಬಹುದು! ಈ ನಿಮಿಷವೇ ಬರಬಹುದು! ಯಾರನ್ನೂ ಕೇಳದೆ ಯಾರಲ್ಲೂ ಹೇಳದೆ ಎಂದಾದರೂ ಒಂದು ದಿನ ಬಂದೇ ಬರುತ್ತದೆ…ಬೇಡ ಎಂದರೂ ಅಪ್ಪಿಕೊಳ್ಳುತ್ತದೆ. ಈ ಕಹಿಸತ್ಯ ತಿಳಿದಿದ್ದರೂ ಆ ದಿನ ನಡೆದ ಘಟನೆ ನನ್ನ ಕಣ್ಣನ್ನು ಒದ್ದೆಯಾಗಿಸಿತು. ಮನಸ್ಸು ಭಾವುಕವಾಯಿತು.
ನಾನು ದಿನಾ ಕಾಣುವ ರೈಲ್ವೆ ನಿಲ್ದಾಣದಲ್ಲಿ ಅದೆಷ್ಟೋ ಶ್ವಾನಗಳಿದ್ದರೂ ಕಳೆದ ಏಳೆಂಟು ತಿಂಗಳುಗಳ ಹಿಂದೆ ಒಂದು ಶ್ವಾನ ನನ್ನ ಗಮನ ಸೆಳೆಯಿತು. ನೋಡಲು ಗುಂಡುಗುಂಡಾಗಿದ್ದರಿಂದ ನಾವೇ ಪ್ರೀತಿಯಿಂದ ಗುಂಡ ಎಂದು ನಾಮಕರಣವನ್ನೂ ಮಾಡಿದೆವು. ನಿಲ್ದಾಣದಲ್ಲೇ ಸಾಕಷ್ಟು ಸಮಯ ಕಳೆಯಬೇಕಾಗಿದ್ದ ನಮಗೆ, ಈ ಗುಂಡನ ಆಟ ನೋಡುವುದೇ ಖುಷಿ. ನನ್ನಂತೆ ಇತರರಿಗೂ ಗುಂಡನೆಂದರೆ ಅಚ್ಚುಮೆಚ್ಚು. ಆತ ಪ್ರತಿದಿನ ರೈಲು ನಿಲ್ದಾಣದಲ್ಲಿ ನನ್ನನ್ನು ಪ್ರೀತಿಯಿಂದ ಸ್ವಾಗತಿಸುತ್ತಿದ್ದ. ಗುಂಡನಿಗೆ ಬೇಕರಿ ತಿನಿಸು ತಿನ್ನಿಸಿ ಮುದ್ದಾಡುವುದೆಂದರೆ ನಮಗೆಲ್ಲರಿಗೂ ಅಚ್ಚುಮೆಚ್ಚು. ಹೆಸರೆತ್ತಿ ಕರೆದರೆ ಸಾಕು ತಲೆ ಆಡಿಸುತ್ತಾ ಬಾಲ ಬೀಸುತ್ತ ಪ್ರೀತಿ ತುಂಬಿದ ಕಣ್ಣುಗಳಿಂದ ನಮ್ಮತ್ತ ನೋಡುತ್ತಿದ್ದ ಗುಂಡ. ಓಡಿ ಬಂದು ಪ್ರೀತಿಯನ್ನು ತನ್ನದೇ ಆದ ಭಾಷೆಯಲ್ಲಿ ವ್ಯಕ್ತಪಡಿಸುತ್ತಿದ್ದ ಆತ ನಮ್ಮ ಹೃದಯಕ್ಕೆ ಹತ್ತಿರವಾಗಿಬಿಟ್ಟಿದ್ದ.
ಆದರೆ ಆ ದಿನ ಮುಂಜಾನೆ ನಡೆಯಬಾರದ ಘಟನೆ ನಡೆದೇಹೋಯಿತು. ರೈಲ್ವೆ ಟ್ರ್ಯಾಕ್ ದಾಟುವ ಭರದಲ್ಲಿ ವೇಗವಾಗಿ ಬಂದ ರೈಲು ಅವನನ್ನು ಮತ್ತೆ ಏಳದಂತೆ ಮಾಡಿತು. ಶಾಶ್ವತವಾಗಿ ಚಿರ ನಿದ್ರೆಗೆ ಜಾರುವಂತೆ ಮಾಡಿತು. ನಾನು ಕಂಡರೆ ಓಡೋಡಿ ಬರುತ್ತಿದ್ದ ಅವನು ಆ ದಿನ ಕಂಡು ಕಾಣದಂತೆ ಮಾಡಿದ್ದ, ನನ್ನ ಜೊತೆ ಆಡಲು ಮತ್ತೆಂದು ಬರಲೇ ಇಲ್ಲ. ಆ ನಿಮಿಷ ನೋವು ಕಂಬನಿ ಮಿಡಿಯುವ ನನ್ನ ಹೃದಯಕ್ಕೆ ಅಮ್ಮ ಹೇಳಿದ ಆ ಮಾತು ನೆನಪಾಯಿತು. ಯಾರನ್ನೂ ಅತಿಯಾಗಿ ಪ್ರೀತಿಸಬೇಡ – ಮೋಹಿಸಬೇಡ… ಅದನ್ನು ಒಮ್ಮೆ ಕಳೆದುಕೊಂಡರೆ ನಿನ್ನ ಮನಸ್ಸು ತಡೆದುಕೊಳ್ಳುವುದು ಕಷ್ಟ. ಯಾರನ್ನು ಹೆಚ್ಚು ಹಚ್ಚಿಕೊಳ್ಳಬೇಡ ಎಂಬುದು…
ಹೌದು ನಾನು ಗುಂಡನನ್ನು ತುಂಬಾನೇ ಪ್ರೀತಿಸುತ್ತಿದ್ದೆ, ಹಚ್ಚಿಕೊಂಡಿದ್ದೆ. ಅವನಿಗೂ ನಾನೆಂದರೆ ಅಚ್ಚುಮೆಚ್ಚು. ಅವನನ್ನು ಕಳೆದುಕೊಂಡ ನನ್ನ ಮನಸ್ಸಿಗೆ ಕಳೆದ ಮಧುರ ಕ್ಷಣಗಳೇ ಸಾಂತ್ವನ ಹೇಳಿದ್ದವು. ಆ ದಿನ ಭಾರವಾದ ಹೃದಯದಿಂದಲೇ ರೈಲನ್ನು ಏರಿ ಪ್ರಯಾಣ ಮುಂದುವರಿಸಿದೆ. ಹೌದು, ಸಾವು ಯಾವಾಗ ಬೇಕಾದರೂ ಬರಬಹುದು, ಕಳೆಯುವ ಕ್ಷಣಗಳನ್ನು ಸುಂದರವಾಗಿ ಕಳೆಯೋಣ…
ಗಿರೀಶ್ ಪಿ.ಎಂ
ಪ್ರಥಮ ಎಂ.ಎ, ಇತಿಹಾಸ ಮತ್ತು ಪುರಾತತ್ವಶಾಸ್ತ್ರ
ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು
Comments
Post a Comment